ರಾಜ ಒಡೆಯರ್ 1 -

1552-1617. ಮೈಸೂರು ರಾಜವಂಶದ ಅರಸು(ಸು. 1578-1617). ಮೂರನೆಯ ಹಿರಿಯ ಬೆಟ್ಟದ ಚಾಮರಾಜನ ಮಗ. ಎರಡನೆಯ ತಿಮ್ಮರಾಜನ ತಮ್ಮ ಹಾಗೂ ಉತ್ತರಾಧಿಕಾರಿ. 1552 ರಲ್ಲಿ ಜನಿಸಿದ. ಈತನಿಗೆ ತಿಮ್ಮ ರಾಜ ಎಂಬ ಹೆಸರೂ ಇದ್ದಂತೆ ತೋರುತ್ತದೆ.

ರಾಜ ಒಡೆಯರ್ ಪಟ್ಟಕ್ಕೆ ಬಂದ ಕಾಲದಲ್ಲಿ ಮೈಸೂರು ರಾಜ್ಯ 33 ಹಳ್ಳಿಗಳನ್ನೊಳಗೊಂಡು, ಕೇವಲ 3,000 ವರಹಗಳ ಆದಾಯ ಹೊಂದಿತ್ತು. ಮೈಸೂರಿನ ರಾಜರು ಸಾಮಂತರಾಗಿ, ವಿಜಯನಗರ ಸಾಮ್ರಾಟರ ಪ್ರಭುತ್ವಕ್ಕೆ ಒಳಪಟ್ಟಿದ್ದರು. ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ಆಡಳಿತಾಧಿಕಾರಿಗೆ ಪೊಗದಿ ಪಾವತಿಯಾಗಬೇಕಾಗಿತ್ತು. 1565 ರ ತಾಳಿಕೋಟೆ ಯುದ್ಧಾನಂತರ ವಿಜಯನಗರ ಸಾಮ್ರಾಜ್ಯ ಒಡೆದು ಹೋದರೂ ಪೂರ್ಣವಾಗಿ ಹಾಳಾಗಿರಲಿಲ್ಲ. ವೆಂಕಟಪತಿರಾಯ ಪೆನುಗೊಂಡೆಯಿಂದ ಆಡಳಿತ ನಡೆಸುತ್ತಿದ್ದ. ತಿರುಮಲರಾಯ ಶ್ರೀರಂಗಪಟ್ಟಣದಲ್ಲಿ ಅವನ ಪ್ರತಿನಿಧಿಯಾಗಿದ್ದ. ರಾಜ ಒಡೆಯರ್ ಇವನ ಹತೋಟಿಗೆ ಒಳಪಟ್ಟಿದ್ದ. ಆದರೆ ಶೂರನೂ ಸಾಮಥ್ರ್ಯಶಾಲಿಯೂ ಆದ ಈತ ತಿರುಮಲರಾಯನ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ರಾಜ್ಯದ ಆರ್ಥಿಕ ಮುಗ್ಗಟ್ಟಿನಿಂದ ಪೊಗದಿಯನ್ನು ಸಲ್ಲಿಸಲು ಸಾಧ್ಯವಿಲ್ಲವೆಂದು ತಿರುಮಲ ರಾಯನಿಗೆ ತಿಳಿಸಿದ್ದಲ್ಲದೆ ಅವನ ಅನುಮತಿ ಪಡೆದು, ತನ್ನ ಅನುಕೂಲಕ್ಕೋಸ್ಕರ ಮೈಸೂರಿನ ಸುತ್ತ ಬಲವಾದ ಕೋಟೆಯೊಂದನ್ನು ಕಟ್ಟಿಸಿದ. 1584 ರಲ್ಲಿ ಹೊಳೆನರಸೀಪುರದ ನರಸಿಂಹ ನಾಯಕನಿಂದ ಅಕ್ಕಿ ಹೆಬ್ಬಾಳನ್ನು ಕಿತ್ತುಕೊಂಡು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. 1586 ರಲ್ಲಿ ರಂಗಸಮುದ್ರ ಮತ್ತು ಅದರ ಸುತ್ತಲು 12 ಹಳ್ಳಿಗಳನ್ನೂ ತಿರುಮಲನಿಂದ ವಶಪಡಿಸಿಕೊಂಡು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ.

ಈತ ನಡೆಸಿದ ದಾಳಿಗಳು ಮತ್ತು ಸಾಧಿಸಿದ ಕಾರ್ಯಗಳನ್ನು ಗಮನಿಸಿದ ತಿರುಮಲರಾಯ ರಾಜ ಒಡೆಯನನ್ನು ಆಸ್ಥಾನಕ್ಕೆ ಕರೆಯಿಸಿ, ಅವನನ್ನು ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಿದ. ಆದರೆ ರಾಜ ಒಡೆಯರ್ ರಾಜ್ಯ ವಿಸ್ತರಣೆಯ ಕಾರ್ಯವನ್ನು ಮುಂದುವರೆಸಿ 1590 ರಲ್ಲಿ ಕೆಂಬಾಳಿನ ದೇವರಾಜನನ್ನು ಸೋಲಿಸಿದ. 1591 ರಲ್ಲಿ ಮುಳ್ಳೂರನ್ನೂ 1593ರಲ್ಲಿ ಹಾರೋಹಳ್ಳಿಯನ್ನೂ ವಶಪಡಿಸಿಕೊಂಡ. 1595 ರಲ್ಲಿ ಕಾರುಗಹಳ್ಳಿ ವೀರರಾಜಯ್ಯನ ಸೇನೆಯನ್ನು ಸೋಲಿಸಿ, ಅವನನ್ನು ಪದಚ್ಯುತಿಗೊಳಿಸಿದ. ತನ್ನನ್ನು ನಿಗ್ರಹಿಸಲು ಶ್ರೀರಂಗ ಪಟ್ಟಣದ ಪ್ರತಿನಿಧಿಯಿಂದ ಆe್ಞÁಪಿತನಾಗಿ ಬಂದ ಉಮ್ಮತ್ತೂರಿನ ಪಾಳೆಯಗಾರನನ್ನೇ ವಧಿಸಿದ. ಮುಂದೆ ಅನೇಕ ಪಾಳೆಗಾರರು ಸೇರಿ ವಿಜಯನಗರದ ಪ್ರತಿನಿಧಿಯನ್ನು ಸೆರೆಹಿಡಿದಾಗ ರಾಜ ಒಡೆಯರ್ ಅವನನ್ನು ಸೆರೆಯಿಂದ ಬಿಡಿಸಿದ. ಈ ಸ್ತುತ್ಯಸೇನೆಗಾಗಿ ವಿಜಯನಗರದ ಅರಸು ರಾಜ ಒಡೆಯರ್‍ಗೆ ಮೈಸೂರು ಜಿಲ್ಲೆಯ ಮತ್ತು ಸೋಸಲೆ ಪ್ರಾಂತ್ಯಗಳನ್ನು ನೀಡಿದ.

ಈ ಸಾಧನೆಗಳು ರಾಜ ಒಡೆಯನ ಶೌರ್ಯ ಸಾಮಥ್ರ್ಯಗಳಿಗೆ ನಿದರ್ಶನಗಳಾದರೂ ವಿಜಯನಗರದ ಪ್ರತಿನಿಧಿಯಾದ ತಿರುಮಲರಾಯನನ್ನು ಶ್ರೀರಂಗಪಟ್ಟಣದಿಂದ ಓಡಿಸಿ, ಅದನ್ನು ಮೈಸೂರು ರಾಜ್ಯಕ್ಕೆ ಸೇರಿಸಿಕೊಂಡಿದ್ದು ಈತನ ಮಹತ್ವದ ಸಾಧನೆ. ಅನೇಕ ಪಾಳೆಯಗಾರರು ಪಿತೂರಿ ನಡೆಸಿ ಈತನನ್ನು ನಿಗ್ರಹಿಸುವಂತೆ ತಿರುಮಲರಾಯನನ್ನು ಪ್ರೇರೇಪಿಸಿದರು. ಅವನು ರಾಜ ಒಡೆಯರ್‍ನ ಶೌರ್ಯ, ಸೇನೆಯ ಶಿಸ್ತು, ಪ್ರಜೆಗಳ ರಾಜನಿಷ್ಠೆ, ಸಮರ್ಪಕ ಆಡಳಿತ ಇವುಗಳನ್ನು ನೋಡಿಮೆಚ್ಚಿದ್ದರೂ ಪಾಳೆಯಗಾರರ ಒತ್ತಾಸೆಯಿಂದ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯುದ್ಧ ಮಾಡಲೇಬೇಕಾಯಿತು. 1596 ರಲ್ಲಿ ದೆಸರೆಯಲ್ಲಿ ನಡೆದ ಭೀಕರ ಯುದ್ಧದಲ್ಲಿ ತಿರುಮಲನ ಸೈನ್ಯ ಸೋತಿತು. ಅವಮಾನಿತನಾದ ತಿರುಮಲರಾಯ ಶ್ರೀರಂಗಪಟ್ಟಣಕ್ಕೆ ಹಿಂತಿರುಗಬೇಕಾಯಿತು.

ರಾಜ ಒಡೆಯರ್ ಮತ್ತೆ ತಿರುಮಲರಾಯನ ರಾಜ್ಯದ ಮೇಲೆ ಆಕ್ರಮಣ ನಡೆಸಿ, ಅನೇಕ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ. 1600 ರಲ್ಲಿ ಅರಕೆರೆ, 1606 ರಲ್ಲಿ ಸೋಸಲೆ, 1607ರಲ್ಲಿ ತಲಕಾಡನ್ನು ಸೇರಿಸಿಕೊಂಡ. 1608 ರಲ್ಲಿ ಪಾಳೆಯಗಾರರ ಪ್ರಬಲವಾದ ಒಕ್ಕೂಟವನ್ನು ಎದುರಿಸಿ ಕುಣಿಗಲು ಯುದ್ಧದಲ್ಲಿ ಅವನನ್ನು ಸೋಲಿಸಿದ. 1610 ರಲ್ಲಿ ತಿರುಮಲರಾಯ ಮತ್ತೆ ರಾಜ ಒಡೆಯರ್‍ನ ಮೇಲೆ ಯುದ್ಧ ಹೂಡಿದಾಗ, ಒಡೆಯರ್‍ನ ಮಗ ನರಸರಾಜ ತಿರುಮಲರಾಯನನ್ನು ಶ್ರೀರಂಗಪಟ್ಟಣದ ಬಳಿ ನಡೆದ ಯುದ್ಧದಲ್ಲಿ ಸೋಲಿಸಿದ. ರಾಜ ಒಡೆಯರ್ ತಿರುಮಲನನ್ನು ಓಡಿಸಿ, ಶ್ರೀರಂಗಪಟ್ಟಣವನ್ನು ತನ್ನ ವಶಕ್ಕೆ ತೆಗೆದುಕೊಂಡ. ಈ ಕ್ರಮಕ್ಕೆವಿಜಯನಗರದ ಅರಸ ವೆಂಕಟನ ಅನುಮೋದನೆಯೂ ದೊರಕಿ, ರಾಜ ಒಡೆಯರ್ ಶ್ರೀರಂಪಟ್ಟಣದಲ್ಲಿ ಆತನ ಪ್ರತಿನಿಧಿಯಾದ. ಆದರೆ ವಸ್ತುತಃ ಈತ ಸ್ವತಂತ್ರನಾಗಿದ್ದು ಮೈಸೂರು ರಾಜ್ಯದ ನಿಜವಾದ ಸ್ಥಾಪಕನಾದ.

ತನ್ನ ಸಾಧನೆಗಳನ್ನು ಮುಂದುವರಿಸಿ ಪಿರಿಯಾಪಟ್ಟಣದ ನಂಜುಂಡ ಅರಸನಿಂದ ಸಿರಿಯೂರನ್ನೂ (1610) ಶ್ರೀಕಂಠ ಒಡೆಯನಿಂದ ಸರಗೂರನ್ನೂ (1612) ಗೆದ್ದುಕೊಂಡ. 1614 ರಲ್ಲಿ ಹದಿನಾಡಿನ ನಂಜರಾಜನನ್ನು ಸೋಲಿಸಿ ತೆರಕಣಾಂಬಿ ಉಮ್ಮತ್ತೂರು ಮೊದಲಾದ ಪ್ರಾಂತ್ಯಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡು ಅದೇ ವರ್ಷ ಹುರವನ್ನೂ, 1615 ರಲ್ಲಿ ಹರದನಹಳ್ಳಿಯನ್ನೂ ಗೆದ್ದ. 1615 ರಲ್ಲಿ ಕಳಲೆ, ಹೆಗ್ಗಡದೇವನ ಕೋಟೆ, ತಲಕಾಡು, ಹುಲ್ಲಹಳ್ಳಿ, ಮಳಲವಾಡಿ ಇತ್ಯಾದಿಗಳನ್ನೂ ಗೆದ್ದು ಕಪ್ಪ ವಸೂಲಿ ಮಾಡಿದ. 1617 ರಲ್ಲಿ ಪಿರಿಯಾಪಟ್ಟಣದ ನಂಜುಂಡ ಅರಸನಿಂದ ಮಾವತ್ತೂರನ್ನು ಗೆದ್ದ.

1617 ರ ಹೊತ್ತಿಗೆ ಮೈಸೂರು ಅರಸರ ರಾಜ್ಯ ಉತ್ತರದಲ್ಲಿ ಶ್ರೀರಂಗಪಟ್ಟಣದಿಂದ ದಕ್ಷಿಣದಲ್ಲಿ ಉಮ್ಮತ್ತೂರು, ತೆರಕಣಾಂಬಿಯವರೆಗೂ ಪೂರ್ವದಲ್ಲಿ ಬನ್ನೂರಿನಿಂದ ಪಶ್ಚಿಮದಲ್ಲಿ ಮಾವತ್ತೂರು, ಅಕ್ಕಿಹೆಬ್ಬಾಳು ಮತ್ತು ಹೊಳೆನರಸೀಪುರದ ವರೆಗೂ ಹಬ್ಬಿತ್ತು. ದಕ್ಷಿಣದಲ್ಲಿ ಚನ್ನಪಟ್ಟಣದ ಜಗದೇವರಾಯನ ರಾಜ್ಯದ ಅಂಚಿನಿಂದ, ದಕ್ಷಿಣದಲ್ಲಿ ಮಧುರೆಯ ನಾಯಕನರಾಜ್ಯದ ಅಂಚಿನ ವರೆಗೂ ಇರುವ ಪ್ರದೇಶಗಳು ರಾಜ ಒಡೆಯರ್‍ನ ರಾಜಕೀಯ ಪ್ರಭಾವದ ವಲಯದೊಳಗಿದ್ದವು. ಸೈನ್ಯದ ಕಾರ್ಯಾಚರಣೆಗಾಗಿ ದಳವಾಯಿ ಪದ್ಧತಿಯನ್ನು ಜಾರಿಗೆ ತಂದ (1614). ರಾಜ ಒಡೆಯರ್‍ನ ರಾಜ್ಯಭಾರ ಕ್ರಮ ಕಟ್ಟುನಿಟ್ಟಿನದಾಗಿತ್ತು.

ಈತ ರೈತರ ಬಗ್ಗೆ ದಯಾಶೀಲನಾಗಿದ್ದ. ವ್ಯವಸಾಯಗಾರರು ಹಿಂದೆ ಕೊಡುತ್ತಿದ್ದ ಕಂದಾಯಕ್ಕಿಂತ ಹೆಚ್ಚುಕೊಡಬೇಕಾಗಿಲ್ಲವೆಂದು ನಿರೂಪ ಹೊರಡಿಸಿ, ಅವರ ಪ್ರೀತಿ ಬೆಂಬಲಗಳನ್ನು ಗಳಿಸಿಕೊಂಡ. ವಿಜಯನಗರದಲ್ಲಿ ಪ್ರಚಲಿತವಾಗಿದ್ದ ನವರಾತ್ರಿ ಉತ್ಸವವನ್ನು ಮೈಸೂರಿನಲ್ಲಿ ನಡೆಸಲು ಆರಂಭಿಸಿದ.

ರಾಜ ಒಡೆಯರ್ ವಿಷ್ಣುಭಕ್ತ. ಆದರೆ ವೈಷ್ಣವ ದೇವಾಲಯಗಳಲ್ಲದೇ ಶೈವ ದೇವಾಲಯಗಳಿಗೂ ಉಂಬಳಿಗಳನ್ನು ಬಿಟ್ಟ. ಮೈಸೂರಿನ ಲಕ್ಷ್ಮೀಕಾಂತ, ಶ್ರೀರಂಗಪ್ಟಣದ ರಂಗನಾಥ ಮತ್ತು ಮೇಲುಕೋಟೆಯ ಚೆಲುವರಾಯ ಈತನ ಆರಾಧ್ಯ ದೈವಗಳು. ಈ ಎಲ್ಲ ದೇವಾಲಯಗಳ ದುರಸ್ತಿಗೂ ಪೂಜಾದಿಗಳಿಗೂ ವ್ಯವಸ್ಥೆ ಮಾಡಿದ. ಮೇಲುಕೋಟೆಯ ದೇವರಿಗೆ ರಾಜಮುಡಿ ಎಂಬ ಕಿರೀಟವನ್ನು ಒಪ್ಪಿಸಿದ. ಮೈಸೂರಿನ ಲಕ್ಷ್ಮೀಕಾಂತ ದೇವಾಲಯದ ಹೆಗ್ಗೋಪುರವನ್ನು ಕಟ್ಟಿಸಿದ. ಈತನ ಕಾಲದಲ್ಲಿ ಶ್ರೀವೈಷ್ಣವ ಮತಕ್ಕೆ ಬಲು ಪ್ರೋತ್ಸಾಹ ದೊರಕಿತು. ಶ್ರೀ ವೈಷ್ಣವಕವಿಗಳಾದ ಶ್ರೀರಂಗಮಾಹಾತ್ಮ್ಯದ ಕರ್ತೃ ಸಿಂಗರಾಚಾರ್ಯ. ಕರ್ಣವೃತ್ತಾಂತವನ್ನು ಬರೆದ ತಿರುಮಲಾರ್ಯ ಇವನ ಆಸ್ಥಾನದಲ್ಲಿದ್ದರು. ತಿರುಮಲಾರ್ಯ ಕೆಲಕಾಲ ರಾಜ ಒಡೆಯರ್‍ನ ಪ್ರಧಾನಿಯೂ ಆಗಿದ್ದ.
ಪಟ್ಟದ ರಾಣಿ ಬೊಮ್ಮನಹಳ್ಳಿಯ ವೀರಾಂಬಾ ಅಲ್ಲದೆ ಈತನಿಗೆ ಅನೇಕ ಪತ್ನಿಯರಿದ್ದರು. ನಂಜರಾಜ, ನರಸರಾಜ, ಬೆಟ್ಟ ಒಡೆಯರ್ ಮತ್ತು ಇಮ್ಮಡಿ ರಾಜ ಒಡೆಯರ್ ಈತನ ಮಕ್ಕಳು.
ಕಿರಿಯ ಪಾಳೆಯಪಟ್ಟಾಗಿದ್ದ ಮೈಸೂರನ್ನು ದೊಡ್ಡ ರಾಜ್ಯವಾಗಿ ವಿಸ್ತರಿಸಿದ ಕೀರ್ತಿಯನ್ನುಳಿಸಿದ ರಾಜ ಒಡೆಯರ್ 1617 ರಲ್ಲಿ ಮೃತನಾದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ